ತಲೆಸುತ್ತು - 
 	ಒಂದು ಅನ್ವರ್ಥವಾದ ದೈಹಿಕ ಬಾಧೆ.  ಬಾಧಿತ ವ್ಯಕ್ತಿಗೆ ತಾನೇ ಅಥವಾ ತನ್ನ ಪರಿಸರ ತನ್ನ ಸುತ್ತ ಸುತ್ತುತ್ತಿರುಂತೆ ಅನುಭವ ಮುಖ್ಯ ಲಕ್ಷಣವಾಗಿರುವ ಸ್ಥಿತಿ.  ಸಾಮಾನ್ಯವಾಗಿ ಅನಾರೋಗ್ಯದ ಲಕ್ಷಣವಾಗಿದ್ದರೂ ಕೆಲವು ವೇಳೆ ಆರೋಗ್ಯ ಸ್ಥಿತಿಯಲ್ಲೂ ಕಂಡುಬರಬಹುದು.  ತಲೆಸುತ್ತು ಸ್ವತಃ ಒಂದು ರೋಗವಾಗಿರದೆ ಇತರ ರೋಗಸ್ಥಿತಿಗಳಲ್ಲಿ ಅನುಷಂಗಿಕವಾಗಿಯೋ ಪ್ರಾಸಂಗಿಕವಾಗಿಯೋ ಕಂಡುಬರುವ ಒಂದು ಲಕ್ಷಣವಾಗಿರುವುದೇ ಸಾಮಾನ್ಯ. 

	1  ಕಿವಿರೋಗಗಳಲ್ಲಿ ತಲೆಸುತ್ತು :  ಒಳಕಿವಿಯ ಉರಿಊತ ತಲೆಸುತ್ತಿನ ಒಂದು ಸಾಮಾನ್ಯ ಕಾರಣ.  ಕ್ವಿನೀನ್, ಸ್ಯಾಲಿಸಿಲೇಟ್‍ಗಳು, ಸ್ಟ್ರೆಪ್ಟೊಮೈಸಿನ್ ಮುಂತಾದ ಔಷಧಗಳ ಸೇವನೆಯಿಂದ ಮತ್ತು ನಡುಕಿವಿಯ ಕೂರು ಹಾಗೂ ದೀರ್ಘಕಾಲಿಕ ಉರಿಊತಗಳಿಂದ ಒಳಕಿವಿಯ ಉರಿಊತ ಉಂಟಾಗಬಹುದು.  ತಲೆಗೆ ತೀವ್ರ ಪೆಟ್ಟು ಬಿದ್ದರೆ ಒಳಕಿವಿಯೊಳಗೆ ರಕ್ತಸ್ರಾವ ಕಡಿಮೆಯಾಗಿಯೊ ಹೆಚ್ಚಾಗಿಯೋ ಉಂಟಾಗಿ ಅದರಿಂದ ತಲೆಸುತ್ತು ಕಂಡುಬರಬಹುದು.  ಯೂಸ್ಟೇಕಿಯನ್ನನ ನಾಳ ಅಥವಾ ಹೊರಕಿವಿನಾಳ ಇವುಗಳಲ್ಲಿ ಏನಾದರೂ ಅಡಚಣೆ ಉಂಟಾಗಿದ್ದರೂ ತಲೆ ಸುತ್ತಬಹುದು.  ಮೂಗಿಗೆ ಸಂಬಂಧಿಸಿದ ಡೊಗರುಗಳ (ನೇಸಲ್ ಸೈನಸಸ್) ಮತ್ತು ಮೂಗಿನ ಧಮನಿಗಳ ರೋಗ ಸ್ಥಿತಿಗಳೂ ತಲೆಸುತ್ತಿಗೆ ಕಾರಣವಾಗಬಹುದು.  ಮೆನಿಯೆರನ ರೋಗ ಎಂಬುದು ಒಳಕಿವಿಗೆ ಸಂಬಂಧಿಸಿದಂತೆ ತಲೆಸುತ್ತನ್ನು ಉಂಟುಮಾಡುವ ಒಂದು ವಿಶೇಷ ಪರಿಸ್ಥಿತಿ.  ಇದರಲ್ಲಿ ಪದೇ ಪದೇ ತಲೆಸುತ್ತು ಕಿವಿ ಗುಂಯ್ ಗÀುಡುವುದು ಮತ್ತು ಕಿವಿ ಕೇಳಿಸದೆ ಇರುವುದು ವಿಶಿಷ್ಟ ಲಕ್ಷಣಗಳು. 

	2  ಕಣ್ಣು ರೋಗಗಳಲ್ಲಿ ತಲೆಸುತ್ತು :  ಕಣ್ಣು ರೋಗಗಳಲ್ಲಿ ತಲೆಸುತ್ತು ಸರ್ವತ್ರ ಅಲ್ಪ ಬಾಧೆಯನ್ನು ಉಂಟುಮಾಡತಕ್ಕದ್ದು.  ಕನ್ನಡಕವನ್ನು ಅದರಲ್ಲಿಯೂ ಪ್ರಬಲವಾಗಿ ಪೀನಮಸೂರಗಳುಳ್ಳÀ ಕನ್ನಡಕವನ್ನು ಮೊತ್ತಮೊದಲಿಗೆ ಉಪಯೋಗಿಸುವವರಲ್ಲಿ ತಲೆಸುತ್ತು ಬರುವುದು ಸಾಮಾನ್ಯ, ಮಾಲುಗಣ್ಣುಳ್ಳುವರು ಮಾಲಾಗಿರುವ ದಿಕ್ಕಿನಲ್ಲಿ ದೃಷ್ಟಿ ಹಾಯಿಸಿದಾಗ ತಲೆಸುತ್ತಬಹುದು.  ರೈಲು ಬಸ್ಸುಗಳಲ್ಲಿ ಸಂಚಾರ ಮಾಡುವಾಗ ಅನೇಕರಿಗೆ ತಲೆಸುತ್ತುವುದು ತಿಳಿದ ವಿಷಯವೇ. 

	3  ಸಾಂಕ್ರಾಮಿಕ ತಲೆಸುತ್ತು :  ಇದಕ್ಕೆ ಕಾರಣ ಸರಿಯಾಗಿ ತಿಳಿಯದು. ಹಠಾತ್ ಪ್ರಾಪ್ತಿ, ಹಲವು ದಿನ ಚಳಿಸುವಿಕೆ, ಬಹುವೇಳೆ ಜೀರ್ಣನಾಳ ಅಥವಾ ಶ್ವಾಸನಾಳಗಳ ಸೋಂಕು ಸ್ಥಿತಿಗಳೊಡನೆ ಸಂಬಂಧಿಸಿರುವುದು ಇದರ ವಿಶಿಷ್ಟ ಲಕ್ಷಣಗಳು. 

	4  ಮಿದುಳಿನ ಅನಾರೋಗ್ಯ ಸ್ಥಿತಿಗಳಲ್ಲಿ ತಲೆಸುತ್ತು :  ಏಡಿಗಂತಿ ಸ್ಥಿತಿ ಇಲ್ಲವೇ ಧಮನಿಗಳ ಅನಾರೋಗ್ಯ, ಅಪಸ್ಮಾರದ ಮುನ್ಸೂಚನೆಯಾಗಿ ಇಲ್ಲವೇ ಮೈಗ್ರೆಯ್ನ್ ಎಂದು ಒಂದು ವಿಶಿಷ್ಟ ತಲೆನೋವಿನಲ್ಲಿ ಹಿರಿಮಸ್ತಿಷ್ಕಕ್ಕೆ ಸಂಬಂಧಪಟ್ಟಂತೆ ತಲೆಸುತ್ತು ಕಂಡುಬರುತ್ತದೆ.  ಕಿರಿಮಸ್ತಿಷ್ಕಕ್ಕೆ ಪೂರೈಕೆ ಆಗುವ ಅಪಧಮನಿಯಲ್ಲಿ ಅಡಚಣೆ ಉಂಟಾದಾಗ ತಲೆಸುತ್ತು  ಉಂಟಾಗಬಹುದು.  ಗಂತಿಪರಿಸ್ಥಿತಿ, ಸಿಫಿಲಿಸ್ ಮುಂತಾದವುಗಳಿಂದ ಎಂಟನೆಯ ಶಿರೋನರದ ಬಾಧೆಯಾದಾಗಲೂ ಮಿದುಳಿನಲ್ಲಿ ಅದರ ಉಗಮಸ್ಥಾನದಲ್ಲಿ ಹಾಗೂ ಅದರ ನೆರೆಯಲ್ಲಿ ಧಮನಿಗಳು ಅನಾರೋಗ್ಯವಾಗಿದ್ದಾಗಲೂ ಡಿಸ್ಸೆಮೀನೇಟೆಡ್ ಸ್ಕ್ಲೀರೋಸಿಸ್ ಎಂಬ ಪರಿಸ್ಥಿತಿಯಲ್ಲೂ ತಲೆಸುತ್ತು ಸಾಮಾನ್ಯ. 

	5. ಮಾನಸಿಕ ಏರುಪೇರುಗಳಲ್ಲಿ ತಲೆಸುತ್ತು ಕಂಡುಬರಬಹುದು.         
								   (ಎನ್. ಎಸ್. ಎಸ್‍ಡಬ್ಯ್ಲು )

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ